ಬಂದೀ ಶಿಬಿರ - 
	ನ್ಯಾಯಾಲಯದ ವಿಚಾರಣೆಗೆ ಒಳಪಡಿಸಿದ ರಾಜಕೀಯ ಭಿನ್ನ ಮತೀಯರನ್ನೂ ರಾಷ್ಟ್ರೀಯರು ಮತ್ತು ಅಲ್ಪಸಂಖ್ಯಾತರನ್ನೂ ರಾಷ್ಟ್ರ ಭದ್ರತೆಯ ಹೆಸರಿನಲ್ಲಿ ಅವರ ಶೋಷಣೆ ಮತ್ತು ದಂಡನೆಗಾಗಿ ನಿರ್ಬಂಧದಲ್ಲಿರಿಸುವ ಶಿಬಿರ. ಸಾಮಾನ್ಯವಾಗಿ ಆಡಳಿತಾಧಿಕಾರಿಗಳ ಇಲ್ಲವೆ ಸೈನ್ಯಾಧಿಕಾರಿಗಳ ಆದೇಶದ ಪ್ರಕಾರ ಬಂಧಿಸಿದವರನ್ನು ಈ ಶಿಬಿರಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ ಅವರನ್ನು ಯಾವ ವಿಚಾರಣೆಗೂ ಒಳಪಡಿಸದೆ ಅನಿರ್ದಿಷ್ಟ ಕಾಲದವರೆಗೆ ಬಂಧನದಲ್ಲಿರಿಸಲಾಗುತ್ತಿತ್ತು. ನಿರ್ದಿಷ್ಟ ಜನಾಂಗ ಮತ್ತು ರಾಜಕೀಯ ಪಂಗಡಗಳಿನುಗುಣವಾಗಿ ಬಂದಿಗಳನ್ನು ಈ ಶಿಬಿರಗಳಲ್ಲಿ ಇರಿಸಲಾಗುತ್ತಿತ್ತೇ ಹೊರತು, ವೈಯಕ್ತಿಕವಾಗಿ ಬಂದಿಗಳನ್ನು ಗುರುತಿಸುತ್ತಿರಲಿಲ್ಲ. ನ್ಯಾಯಾಲಯಗಳ ತೀರ್ಪಿನಂತೆ ಅಪರಾಧಿಗಳನ್ನು ನಿರ್ದಿಷ್ಟಕಾಲ ಸೆರೆಯಲ್ಲಿ ಇಡುವ ಬಂದೀಖಾನೆಗಳಿಗೂ ಯುದ್ಧ ನಿಯಮಗಳ ಪ್ರಕಾರ ಸೆರೆ ಸಿಕ್ಕಿದ ಸೈನಿಕರನ್ನು ಬಂಧನದಲ್ಲಿಡುವ ಯುದ್ಧ ಕೈದಿಗಳ ಶಿಬಿರಗಳಿಗೂ ಮತ್ತು ನಿರಾಶ್ರಿತರಿಗೆ ತಾತ್ಕಾಲಿಕ ವಸತಿ ನೀಡುವ ನಿರಾಶ್ರಿತರ ಶಿಬಿರ ಮುಂತಾದವುಗಳಿಂದ ಈ ಬಂದೀಶಿಬಿರಗಳು ಪ್ರತ್ಯೇಕವಾದವು. ಯುದ್ಧಕಾಲದಲ್ಲಿ ಸ್ಥಳೀಯರು ಯುದ್ದ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಭಾಗವಹಿಸದಂತೆ, ಶತ್ರುಗಳಿಗೆ ನೆರವು ನೀಡದಂತೆ ಮತ್ತು ಅವರು ಭಯಗೊಂಡು ಸರ್ಕಾರಕ್ಕೆ ಎದುರಾಡದಂತೆ ಮಾಡಲು ಮತ್ತು ಅನುಮಾನ ಬಂದ ಕೆಲವರನ್ನೂ ಬಂಧಿಸಿ ಬಂದೀಶಿಬಿರಗಳಲ್ಲಿಡುವುದುಂಟು.

	ಸ್ಪೇನ್ ಆಡಳಿತದ ವಿರುದ್ದ ಕ್ಯೂಬಾ ಜನತೆ ದಂಗೆ ಎದ್ದಾಗ (1895) ಸ್ಪ್ಯಾನಿಷ್ ಸರ್ಕಾರ ಅದನ್ನು ಹತ್ತಿಕ್ಕಲು ಕಳಿಸಿದ ಮಿಲಿಟರಿ ಅಧಿಕಾರಿ 21 ಅಕ್ಟೋಬರ್ 1896ರಲ್ಲಿ ಬಂದೀಶಿಬಿರ ಯೋಜನೆ ಜಾರಿಗೆ ತಂದು ಕ್ಯೂಬದ ನಾಗರಿಕರನ್ನು ಬಂಧಿಸಿ ಬಂದೀ ಶಿಬಿರಗಳಲ್ಲಿಟ್ಟು ದುಡಿಸಿಕೊಳ್ಳುತ್ತಿದ್ದ. ಹಾಗೆಯೇ ದಕ್ಷಿಣ ಆಫ್ರಿಕದ ಬೋಯರ್ ಯುದ್ಧಕಾಲದಲ್ಲಿ (1901-02) ಬ್ರಿಟಿಷರು ಟಾನ್ಸ್‍ವಾಲ್ ಹಾಗೂ ಕೇಪ್‍ಕಾಲೋನಿಯ ನಾಗರೀಕರನ್ನು ಬಂಧಿಸಿ ಬಂದೀಶಿಬಿರಗಳಲ್ಲಿ ಇರಿಸಿದ್ದರು. ಯುದ್ಧದ ಕೊನೆಯ ಹೊತ್ತಿಗೆ ಬಂದೀಶಿಬಿರಗಳಲ್ಲಿ ಸುಮಾರು 2 ಲಕ್ಷ ಮಂದಿಯನ್ನು ಬಂಧಿಸಿಡಲಾಗಿತ್ತೆಂದು ತಿಳಿದು ಬಂದಿದೆ. ಜಪಾನ್ ಮತ್ತು ಅಮೆರಿಕಗಳ ನಡುವೆ ಯುದ್ಧ ಪ್ರಾರಂಭವಾದಾಗ (7 ಡಿಸೆಂಬರ್ 1941) ಸೈನ್ಯೇತರ ನಾಗರಿಕರನ್ನು ಬಂದೀ ಶಿಬಿರಗಳಲ್ಲಿಟ್ಟುದ್ದುದು ಮತ್ತೊಂದು ನಿದರ್ಶನ. ಆಗ ಸುಮಾರು ಒಂದು ಲಕ್ಷ ಮಂದಿ ಜಪಾನಿನ ಪಶ್ಚಿಮ ತೀರದ ನಾಗರಿಕರನ್ನು ಹಾಗೂ ಜಪಾನೀ ಅಮೆರಿಕನ್ ಸಂಮಿಶ್ರ ಜನರನ್ನು ಸೆರೆಹಿಡಿದು ಜಪಾನಿನ ಮಧ್ಯಭಾಗದಲ್ಲಿ ಸ್ಥಾಪಿಸಲಾಗಿದ್ದ ಬಂದೀಶಿಬಿರಗಳಲ್ಲಿ ಇಡಲಾಗಿತ್ತು.

	ಸರ್ವಾಧಿಕಾರೀ ರಾಷ್ಟ್ರಗಳಲ್ಲಿ ಪ್ರಜೆಗಳ ಮೇಲೆ ರಾಷ್ಟ್ರದ ಹಿಡಿತವಿರಿಸಿಕೊಳ್ಳಲು ರಾಜಕೀಯ ಬಂದೀಶಿಬಿರಗಳು ವಿವಿಧ ರೂಪಗಳನ್ನು ತಾಳಿವೆ. ಸೋವಿಯತ್ ರಷ್ಯ ತನ್ನ ರಹಸ್ಯದಳದ ಹಿಡಿತದಲ್ಲಿ 1917ರಿಂದ ಕಠಿಣ ದೇಹಶ್ರಮ ವಿಧಿಸುವ ಬಂದೀಶಿಬಿರಗಳನ್ನು ನಡೆಸಿಕೊಂಡು ಬಂದಿದೆ. 1922ರ ಹೊತ್ತಿಗೆ ಗೂಢಚಾರಿಕೆ, ಆಂದೋಳನ ವಿರುದ್ಧದ ಚಳವಳಿ ಲೂಟಿ, ರಾಷ್ಟ್ರಗಡಿಯಿಂದ ಅಕ್ರಮ ನಿರ್ಗಮನ ಈ ಬಗೆಯ ಅಪರಾಧಿಗಳನ್ನು ಸೆರೆಯಲ್ಲಿ ಇಡಲು ಬಂದೀಶಿಬಿರಗಳನ್ನು ಏರ್ಪಡಿಸಲಾಯಿತು. ರಷ್ಯದ ಉತ್ತರ ಹಾಗೂ ಸೈಬೀರಿಯ ಪ್ರದೇಶಗಳಲ್ಲಿ ಅಪರಾಧಿಗಳನ್ನು ತಿದ್ದಲು ಅನೇಕ ಕಾರ್ಮಿಕ ಬಂದೀಶಿಬಿರಗಳು ರಷ್ಯದ ಮೊದಲ ಪಂಚವಾರ್ಷಿಕ ಯೋಜನೆಯ ಕಾಲದಲ್ಲಿ (1928-32) ತೆರೆಯಲ್ಪಟ್ಟವು. ಆಗ ಶ್ರೀಮಂತ ರೈತರನೇಕರನ್ನು ಅವರ ಜಹಗೀರುಗಳಿಂದ ಓಡಿಸಿ, ಸಾಮೂಹಿಕ ವ್ಯವಸಾಯ ಪದ್ದತಿಯನ್ನು ಜಾರಿಗೆ ತಂದು ಸೆರೆಯಾಳುಗಳ ದುಡಿತದಿಂದ ವ್ಯವಸಾಯ ನಡೆಸಿದರು. 1936-38ರ ನಡುವೆ ಸಾವಿರಾರು ಮಂದಿ ರೈತರನ್ನು ಈ ಬಂದೀಶಿಬಿರಗಳಲ್ಲಿಟ್ಟು ಗುಲಾಮರಂತೆ ದುಡಿಸಿದರು. ರಷ್ಯ 1939ರಲ್ಲಿ ಪೂರ್ವ ಪೋಲೆಂಡನ್ನು ಆಕ್ರಮಿಸಿಕೊಂಡು, 1940ರಲ್ಲಿ ಬಾಲ್ಟಿಕ್ ರಾಜ್ಯಗಳನ್ನು ವಶಪಡಿಸಿಕೊಂಡ ಮೇಲೆ ಸಾವಿರಾರು ರಷ್ಯೇತರ ನಾಗರಿಕ ಬಂದಿಗಳಿಗಾಗಿ ಬಂದೀಶಿಬಿರಗಳು ಸ್ಥಾಪನೆಯಾದವು. ರಷ್ಯ 1941ರಲ್ಲಿ ಜಪಾನಿನ ಮೇಲೆ ಯುದ್ಧ ಘೋಷಿಸಿದಾಗ ಸೈನಿಕ ಬಂದಿಗಳನ್ನು ಹಾಗೂ ಶತ್ರುಗಳೊಂದಿಗೆ ಸಂಚು ನಡೆಸಿದರೆಂಬ ಆಪಾದನೆಯ ಮೇಲೆ ಸೆರೆಯಾದ ರಷ್ಯದ ನಾಗರಿಕರನ್ನು ಬಂದೀಶಿಬಿರಗಳಲ್ಲಿರಿಸಿದರು. ಸ್ಪಾಲಿನ್ 1953ರಲ್ಲಿ ತೀರಿಕೊಂಡ ಮೇಲೆ ಅನೇಕ ಬಂದಿಗಳ ಬಿಡುಗಡೆಯಾಗಿ ಬಂದೀಶಿಬಿರಗಳು ಕಡಿಮೆಯಾದವು.

	1934 ಆಗಸ್ಟ್ ತಿಂಗಳಲ್ಲಿ ಜರ್ಮನಿಯ ಅಧ್ಯಕ್ಷ ಹಿಂಡನ್‍ಬರ್ಗ್ ಮರಣ ಹೊಂದಿದಾಗ ಹಿಟ್ಲರ್ ತಾನೇ ಅಧ್ಯಕ್ಷ ಮತ್ತು ಚಾನ್ಸೆಲರ್ ಆದ. ತನ್ನ ನಾಟ್ಸಿ ಪಕ್ಕಕ್ಕೆ ಹೆಚ್ಚು ಜನ ಬೆಂಬಲ ಗಳಿಸಿಕೊಳ್ಳಲು ಜರ್ಮನರು ಶ್ರೇಷ್ಠ ಆರ್ಯನ್ ಜನಾಂಗದವರೆಂದೂ ಜರ್ಮನಿಯಲ್ಲಿ ಮುಂದೆ ಈ ಜನಾಂಗದವರೇ ಬಾಳಬೇಕು ಆಳಬೇಕು ಅದಕ್ಕೆ ಅಡ್ಡಿ ಯಾರು ಬರಬಾರದು ಎಂದೂ ಜನಾಂಗ ದ್ವೇಷವನ್ನು ಜನರಲ್ಲಿ ಬಿತ್ತಿ ಯಹೂದಿ ಜನಾಂಗವನ್ನು ನಿರ್ನಾಮ ಮಾಡಲು ಪ್ರಯತ್ನಿಸಿದ. ಅವನ ರಾಕ್ಷಸೀ ಪ್ರವೃತ್ತಿಯ ಈ ನೆಲೆಗಳೇ ಬಂದೀಶಿಬಿರಗಳಾದವು.

	ನಾಟ್ಸಿ ಜರ್ಮನಿಯಲ್ಲಿ 1934ರಿಂದ 1945ರ ತನಕ ಇದ್ದ ಬಂದೀಶಿಬಿರಗಳು ಹಿಟ್ಲರನ ಪ್ರಸಿದ್ದ ವಿಶೇಷ ಪೋಲೀಸ್ ದಳ ಎಸ್. ಎಸ್. ನ ಮೇಲ್ವಿಚಾರಣೆಯಲ್ಲಿದ್ದವು. ಎರಡನೆಯ ಮಹಾಯುದ್ಧ ಕಾಲದಲ್ಲಿ (1939-45) ಜರ್ಮನಿಯಲ್ಲಿ ಹಾಗೂ ಜರ್ಮನಿ ಆಕ್ರಮಿಸಿಕೊಂಡಿದ್ದ ಪ್ರದೇಶಗಳಲ್ಲಿ ಏರ್ಪಟ್ಟ ಎಲ್ಲ ಬಂದೀಶಿಬಿರಗಳಲ್ಲಿ ಒಟ್ಟು 2.6 ಕೋಟಿ ಸೈನಿಕ ಬಂದಿಗಳನ್ನೂ ರಾಜಕೀಯ ಹಾಗೂ ನಾಗರಿಕ ಬಂದಿಗಳನ್ನೂ ಕೊಂದರೆಂದು ತಿಳಿದು ಬಂದಿದೆ. ಬಂದೀಶಿಬಿರಗಳಲ್ಲಿ ಕೊರೆಯುವ ಚಳಿಯ ಪರಿಸರದಲ್ಲಿ ವಾಸ, ಹಸಿವು ಅಂಟುರೋಗ, ಹಿಂಸೆ ಬಂದಿಗಳ ಮೇಲೆ ವೈದಕೀಯ ಪ್ರಯೋಗಪರೀಕ್ಷೆ ಇವೆಲ್ಲಕ್ಕೆ ತುತ್ತಾಗಿ ಅನೇಕ ಮಂದಿ ಸತ್ತರಲ್ಲದೆ ವಿಷವಾಯು ಕೋಣೆಗಳಲ್ಲಿ ಕುರಿಗಳಂತೆ ಬಂದಿಗಳನ್ನು ತುಂಬಿ ಸಾವಿರಾರು ಮಂದಿಯನ್ನು ಸಾಯಿಸಿದರು.

	ಜರ್ಮನಿಯಲ್ಲಿ ಮೊದಲು ಬಂದೀಶಿಬಿರಗಳು ಸ್ಥಾಪನೆಯಾದಾಗ (1934) ಅವುಗಳಲ್ಲಿ ನಾಟ್ಸಿ ಪಕ್ಷವನ್ನು ವಿರೋಧಿಸಿದ ಸಮತಾವಾದಿಗಳನ್ನೂ ಸಮಾಜವಾದೀ ಪ್ರಜಾಸತ್ತೆಯ ಬೆಂಬಲಿಗರನ್ನೂ ಸೆರೆಯಿಡಲಾಗಿತ್ತು. ತರುವಾಯ ಯೆಹೂದಿಯರನ್ನು ಸಹ ನಾಟ್ಸಿ ವಿರೋಧಿಗಳೆಂದು ಶಿಬಿರಗಳಿಗೆ ತಳ್ಳಿದರು. 1938ರ ವೇಳೆಗೆ 6 ಲಕ್ಷ ಯಹೂದಿಗಳನ್ನು ಬಂದೀಶಿಬಿರಗಳಲ್ಲಿಟ್ಟು ಕೊಂದರು. ಯುದ್ಧಕ್ಕೆ ಅಗತ್ಯವಾದ ವಸ್ತುಗಳನ್ನು ತಯಾರಿಸಿಕೊಳ್ಳಲು ಜರ್ಮನಿ ಬಂದೀಶಿಬಿರಗಳ ಬಂದಿಗಳನ್ನು ಕಾರ್ಮಿಕರನ್ನಾಗಿ ಬಳಸಿಕೊಂಡಿತು. ಈ ಬಗೆಯ ಬಂದೀಶಿಬಿರ ಕಾರ್ಖಾನೆಗಳನ್ನು ಜರ್ಮನಿ ಆಕ್ರಮಿತ ಯೂರೋಪಿನ ಅನೇಕ ಭಾಗಗಳಲ್ಲಿ ಸ್ಥಾಪಿಸಲಾಯಿತು. ಬಂದೀಶಿಬಿರದ ಜನ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡಿ ಆಹಾರ ಸಂಪಾದಿಸಿಕೊಳ್ಳಬೇಕಾಗಿತ್ತು. ಅನೇಕ ಮಂದಿ ಕೆಲಸ ಮಾಡಲಾಗದ ಅಶಕ್ತರು ಹಸಿವೆಯಿಂದ ಸತ್ತರೆ ಬಹುಮಂದಿ ಮಿತಿ ಮೀರಿದ ದುಡಿಮೆಯಿಂದ ಸತ್ತರು.

	ಬಂದೀಶಿಬಿರದ ರುದ್ರರೂಪವೆಂದರೆ, ಜರ್ಮನಿ 1940ರಲ್ಲಿ ಸ್ಥಾಪಿಸಿದ ಮೃತ್ಯುಶಿಬಿರಗಳು. ಹಿಟ್ಲರ್ ಅವನ್ನು ಪ್ರಧಾನವಾಗಿ ಪೋಲೆಂಡಿನಲ್ಲಿ ಸ್ಥಾಪಿಸಿ ಯಹೂದಿಗಳನ್ನು ಸಾಮೂಹಿಕವಾಗಿ ಹಾಗೂ ಸಂಪೂರ್ಣವಾಗಿ ನಾಶಮಾಡಲು ಸಂಕಲ್ಟಿಸಿದ. ಈ ಸಾವಿನ ಬಂದೀಶಿಬಿರಗಳಲ್ಲಿ ಅತ್ಯಂತ ಕುಪ್ರಸಿದ್ಧವಾದವು ಪೋಲೆಂಡಿನ ಓಷ್‍ವೀಟ್ಸ್ ಮಾಗ್ಡನಾಕ್ ಮತ್ತು ಟ್ರೆಬ್ಲೀಂಕ್ ಶಿಬಿರಗಳು, ಜರ್ಮನಿಯ ಬ್ಯೂಕನ್‍ವಾಲ್ಟ್ ಶಿಬಿರ. ಓಷ್‍ವೀಟ್ಸ್ ಶಿಬಿರ ಒಂದರಲ್ಲೇ ಜರ್ಮನರು ಸುಮಾರು 25 ಲಕ್ಷ ಮಂದಿಯನ್ನು ಸಾವಿಗೆ ನೂಕಿದ್ದರು. ಬ್ಯೂಕನ್‍ವಾಲ್ಟ್ ಶಿಬಿರಗಳ ಸೆರೆಯಾಳುಗಳನ್ನು ಪ್ರಾಣಿಗಳಿಗಿಂತಲೂ ಕಡಿಮೆಯಾಗಿ ನಿರ್ದಯವಾಗಿ ವೈದ್ಯಕೀಯ ಪ್ರಯೋಗ ಪರೀಕ್ಷೆಗಳಿಗೆ ಬಳಸಿಕೊಂಡರು.

	ಜರ್ಮನಿ ಸುಮಾರು 2,000 ಶಿಬಿರಗಳನ್ನು ಸ್ಥಾಪಿಸಿತ್ತು. ಎರಡನೆಯ ಮಹಾಯುದ್ಧಕಾಲದಲ್ಲಿ ಸುಮಾರು ಶಿಬಿರಗಳನ್ನು ಬಂದಿಗಳನ್ನು ವಧಿಸಲೆಂದೇ ಬಳಸಿಕೊಂಡು ಎಂಟು ಮಿಲಿಯಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಯಿತು. ಮಹಾಯುದ್ಧಾನಂತರ ಬಂದೀಶಿಬಿರಗಳ ಮೇಲ್ವಿಚಾರಣೆಯಲ್ಲಿದ್ದು ಬಂದಿಗಳ ಬಗ್ಗೆ ಕ್ರೂರಕೃತ್ಯಗಳನ್ನು ನಡೆಸಿದ ಜರ್ಮನಿ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲಾಯಿತು. ವಿಚಾರಣೆ ನಡೆದು ಅನೇಕರಿಗೆ ಮರಣದಂಡನೆ ವಿಧಿಸಲಾಯಿತು. ಕೆಲವರು ಮಾರುವೇಷಗಳಲ್ಲಿ ತಲೆತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ವಿದೇಶಗಳಿಗೆ ಓಡಿಹೋದರು. ಅಂಥ ಮಂದಿಯಲ್ಲೂ ಕೆಲವರನ್ನು ಗುರುತಿಸಿ ವಿಚಾರಣೆಗೆ ಗುರಿಪಡಿಸಲಾಯಿತು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ